ಮುಟ್ಟಿನ ಮಾರುಕಟ್ಟೆ – ಒಂದು ವಿಶ್ಲೇಷಣೆ

ಅಕ್ಕ, ಮುಟ್ಟಿನ ಸಮಯದಲ್ಲಿ ದೇವಸ್ಥಾನಕ್ಕೆ ಏಕೆ ಹೋಗಬಾರದು?

ಇದು ಕೆಟ್ಟರಕ್ತ ಅಂತ ಹೇಳುವುದು ನಿಜಾನಾ?

ಅಕ್ಕ, ಈ ಸಮಯದಲ್ಲಿ ಮೊಸರು, ಮೊಟ್ಟೆ, ಮಾಂಸ, ಉಪ್ಪಿನಕಾಯಿ ತಿನ್ನಬಾರದು ಅಂತ ಏಕೆ ಹೇಳುತ್ತಾರೆ?

ಕಳೆದ ಐದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಋತುಸ್ರಾವದ ಬಗ್ಗೆ ಮಾಡಿರುವ ನೂರಕ್ಕಿಂತ ಹೆಚ್ಚು ಅವಧಿಗಳಲ್ಲಿ ಹೆಣ್ಣುಮಕ್ಕಳು ನನಗೆ ಕೇಳಿರುವ ಪ್ರಶ್ನೆಗಳು ಇವು. ಈ ಪ್ರಶ್ನೆಗಳಿಗೆ ಉತ್ತರ ನೀಡಲು ಹೋದಾಗ, ಎರಡು ವಿಚಾರಗಳು ನನ್ನನ್ನು ಗೊಂದಲಕ್ಕೀಡುಮಾಡಿದವು. ಮೊದಲು, ಮುಟ್ಟಿಗೆ ಸಂಬಂಧಪಟ್ಟ ಯಾವುದೇ ನಿರ್ಬಂಧಗಳು ನಾವು ಅಶುದ್ಧರಾಗಿರುವುದರಿಂದಲ್ಲ, ಎಂದು ಹೇಗೆ ತಿಳಿಸಲಿ? ಎರಡನೇಯದು, ನಾನು ಯಾವ ಕಾರಣಕ್ಕೂ ಅವರ ಧಾರ್ಮಿಕ ಹಾಗು ಸಾಂಸ್ಕೃತಿಕ ಭಾವನೆಗಳನ್ನು ನೋಯಿಸದೇ ಹೇಗೆ ಈ ವಿಷಯದ ಬಗ್ಗೆ ಹೇಳಲಿ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ನಾನು ನನ್ನ ತಂಡದವರು ಒಂಬತ್ತು ರಾಜ್ಯಗಳಿಗೆ ಪ್ರವಾಸ ಮಾಡಿ, ಹದಿನೇಳು ಸಾವಿರ ಹದಿಹರೆಯದ ವಯಸ್ಸಿನ ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಜೊತೆ ಮಾತನಾಡಿ, ಸುಮಾರು ನೂರು ಸಂಶೋಧನ ಲೇಖನಗಳನ್ನು ಅಧ್ಯಯನ ಮಾಡಿ ಕಲಿತದ್ದನ್ನು ಈ ಲೇಖನದ ಮುಖಾಂತರ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.

ಆರಂಭದಲ್ಲಿ, ನಾವು ಪಾಶ್ಚಾತ್ಯ ವೈದ್ಯಕೀಯ ಪದ್ಧತಿಯ(allopathy) ಮುಖಾಂತರ ಈ ವಿಷಯಗಳನ್ನು ವಿವರಿಸಲು ಪ್ರಯತ್ನಿಸಿದೆವು. ಆದರೆ ಈ ಪ್ರಶ್ನೆಗಳ ಉತ್ತರ ಎಲ್ಲೂ ಸಿಗಲಿಲ್ಲ. ಹೀಗಾಗಿ, ಈ ಪ್ರಶ್ನೆಗಳನ್ನು ವಿವರಿಸಲು ದೇಶೀಯ ವೈದ್ಯಕೀಯ ಪದ್ಧತಿಯಲ್ಲಿ ಉತ್ತರ ಹುಡುಕುವುದು ಅನಿವಾರ್ಯವಾಯಿತು, ಎಂದರೆ, ಆಯುರ್ವೇದ, ಯೋಗ, ಮುದ್ರ ಇತ್ಯಾದಿ.

ನಾವು ಕಲಿತಿರುವುದರಲ್ಲಿ ಅತಿ ಅನಿರೀಕ್ಷಿತವಾದ ಎರಡು ವಿಷಯಗಳಿವೆ – ಒಂದು, ಋತುಸ್ರಾವಕ್ಕೆ ಸಂಬಂಧಪಟ್ಟ ಯಾವುದೇ ಪದ್ಧತಿಗಳು ಮಹಿಳೆಯರನ್ನು ನಿಗ್ರಹಿಸಲು ಆವಿಷ್ಕಾರ ಮಾಡಿರುವುದಲ್ಲ. ಎರಡನೆಯದು, ಈ ಪಧ್ದತಿಗಳು ಧಾರ್ಮಿಕ ಕಾರಣಗಳಲ್ಲಿ ಬೇರೂರಿರುವಂತಹದಲ್ಲ.

 1. ಆಹಾರಕ್ಕೆ ಸಂಬಂಧಿಸಿದ ಪದ್ಧತಿಗಳು

ಆಯುರ್ವೇದದ ಪ್ರಕಾರ ಋತುಸ್ರಾವವು ಮಹಿಳೆಯರಲ್ಲಿ ಆಗುವ ಅತ್ಯಮೂಲ್ಯ ಕ್ರಿಯೆ ಹಾಗು ಮಹಿಳೆಯರು ಧೀರ್ಘಕಾಲ ಬದುಕಲು ಋತುಸ್ರಾವವೇ ಕಾರಣ. ಏಕೆಂದರೆ ಋತುಸ್ರಾವದ ಸಮಯ ನಮ್ಮ ಶರೀರದಲ್ಲಿ ಸಂಚಿತ ಟಾಕ್ಸಿನ್ ಗಳಿಗೆ ಹೊರಬರುವ ಅವಕಾಶ ನೀಡುತ್ತದೆ. ಬಹುಶಃ ಇದೇ ಕಾರಣಕ್ಕೆ ರಕ್ತವೇ ಕೆಟ್ಟದ್ದು ಎನ್ನುವ ಅಭಿಪ್ರಾಯ ಬಂದಿರಬಹುದು. ಈ ಟಾಕ್ಸಿನ್ ಗಳಿಗೆ ಆಯುರ್ವೇದದಲ್ಲಿ “ಆಮ” ಎಂದು ಕರೆಯುತ್ತಾರೆ. ಆಮ ಉಂಟಾಗುವುದು ನಮ್ಮಲ್ಲಿ ಯಾವುದೇ ದೋಷದ ಅಸಮತೋಲನ ಇದ್ದರೆ, ಅಥವಾ ಆಹಾರ ಪೂರ್ಣ ರೀತಿಯಲ್ಲಿ ಜೀರ್ಣವಾಗದೆ ಇದ್ದರೆ. ಉದಾಹರಣೆಗೆ, ಹೆಚ್ಚು ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮಾಂಸ, ಅಪೌಷ್ಟಿಕ ಆಹಾರ, ಇತ್ಯಾದಿಗಳನ್ನು ಮಿತಿಮೀರಿ ತಿನ್ನುವುದರಿಂದ ಆಮ ಉಂಟಾಗುತ್ತದೆ. ಶರೀರದಲ್ಲಿ ಉಂಟಾಗುವ ಹಲವಾರು ಕಾಯಿಲೆಗಳಿಗೆ ಆಮವೇ ಕಾರಣ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹೀಗಾಗಿ ಋತುಸ್ರಾವದ ಮೂಲಕ ಆಮ ಹೊರಬಂದ ನಂತರದ ಮೊದಲನೆಯ ವಾರ ಮಹಿಳೆಯರು ಬಹಳ ಹುರುಪಿನಿಂದ ಕೂಡಿರುತ್ತಾರೆ. ಹೀಗೆ, ಮುಟ್ಟಿನ ರೂಪದಲ್ಲಿ ಮಹಿಳೆಯರ ಶರೀರದಲ್ಲಾಗುವ ತಿಂಗಳ ಮೇನ್ಟನನ್ಸ್ ಅವರನ್ನು ಹಲವಾರು ರೋಗಗಳಿಂದ ದೂರವಿಡುತ್ತದೆ.

ಆದರೆ, ಆಮ ಹೊರಬರುವುದು ಋತುಸ್ರಾವದ ರಕ್ತದಿಂದ ಅಲ್ಲ. ಇದು ವ್ಯಕ್ತವಾಗುವುದು ಮುಟ್ಟಿನ ಸಮಯದಲ್ಲಿ ಆಗುವ ಬೇರೆ ಬೇರೆ ಸಮಸ್ಯೆಗಳಿಂದ. ಇದೇ ಕಾರಣಕ್ಕೆ ಹಲವಾರು ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ವಿಪರೀತ ಹೊಟ್ಟೆನೋವು, ವಾಂತಿ, ಬೇಧಿ, ಮುಖದಲ್ಲಿ ಗುಳ್ಳೆ ಬರುವುದು ಸಾಮನ್ಯವಾಗಿದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಹುಳಿ, ತಂಪು, ಉಪ್ಪು, ಖಾರಾ, ಮಾಂಸಹಾರಿ ಆಹಾರಗಳನ್ನು ಸಾಂಸ್ಕೃತಿಕ ಪದ್ಧತಿಗಳ ಮುಖಾಂತರ ನಿಷೇಧಿಸಲಾಗಿದೆ. ಮುಟ್ಟಿನ ಸಮಯದಲ್ಲಿ ಈ ವಸ್ತುಗಳು ಶರೀರದ ವಾತ  ದೋಷವನ್ನು ಉಲ್ಬಣಗೊಳಿಸಿ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟುಮಾಡುವುದು. ಶರೀರದಲ್ಲಿ ಆಮ ಎಷ್ಟು ಕಡಿಮೆ ಇರುವುದೋ ಮುಟ್ಟಿನ ಸಮಸ್ಯೆಗಳು ಅಷ್ಟೇ ಕಡಿಮೆ ಇರುವುದು.

ಆಯುರ್ವೇದ ವೈದ್ಯರ ಸಲಹೆಯ ಪ್ರಕಾರ ಆಹಾರ ವಿಧಾನಗಳಲ್ಲಿ ಬದಲಾವಣೆ ತಂದರೆ, ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವುಗಳು, ಅಸ್ವಸ್ಥತೆಗಳು ಕಡಿಮೆ ಆಗುವುದನ್ನು ನಾವೇ ಅನುಭವಿಸಿ ಅರಿಯಬಹುದು.

 1. ಧಾರ್ಮಿಕ ಚಟುವಟಿಕೆಗಳ ನಿಷೇಧ

ಆಯುರ್ವೇದದ ಪ್ರಕಾರ ಶರೀರದ ಎಲ್ಲಾ ಕ್ರಿಯೆಗಳು ಸೂಕ್ಷ್ಮವಾಗಿ ನಡೆಯಲು ಕಾರಣ ನಮ್ಮಲ್ಲಿರುವ ತ್ರಿದೋಷಗಳ ಸಮತೋಲನ – ವಾತ, ಪಿತ್ತ ಹಾಗು ಕಫ ದೋಷ. ಋತುಸ್ರಾವದ ಸಮಯದಲ್ಲಿ ಪ್ರಭಲವಾಗಿರುವುದು ವಾತದೋಷ. ವಾತದೋಷದ ಉಪದೋಷವಾದ “ಅಪಾನ ವಾಯು” ಋತುಸ್ರಾವದ ಸಮಯದಲ್ಲಿ ಹಾಗೂ ಹೆರಿಗೆ ಸಮಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಎರಡೂ ಸಮಯದಲ್ಲಿ ಅಪಾನ ವಾಯು ಯಾವಾಗಲೂ ಕೆಳದಿಕ್ಕಿಗೇ ಇರಬೇಕು. ಇದರಿಂದ ಮುಟ್ಟಿನ ಸಮಯದಲ್ಲಿ ರಕ್ತವೂ, ಹೆರಿಗೆ ಸಮಯದಲ್ಲಿ ಮಗುವೂ ಹೊರಬರಲು ಸಾಧ್ಯವಾಗುತ್ತದೆ. ಒಂದು ವೇಳೆ ಅಪಾನ ವಾಯುವಿನಲ್ಲಿ ತೊಂದರೆ ಅಥವಾ ಅದರ ದಿಕ್ಕು ಬದಲಾಗಿದ್ದರೆ, ಸಮಸ್ಯೆ ಉಂಟಾಗಬಹುದು.

ದೇವಸ್ಥಾನಗಳು, ವಿಶೇಷವಾಗಿ ಹಳೇ ದೇವಸ್ಥಾನಗಳನ್ನು ಸ್ಥಾಪಿಸುವಾಗ “ಆಗಮ ಶಾಸ್ತ್ರ” ಎನ್ನುವ ವೈಜ್ಞಾನಿಕ ವಿದ್ಯೆಯನ್ನು ಬಳಸಿದ್ದರು. ಆಗಮ ಶಾಸ್ತ್ರ ಎಂದು ಕರೆಯಲ್ಪಡುವ ಈ ವಿಜ್ಞಾನದ ತಿಳುವಳಿಕೆ ಪ್ರತ್ಯೇಕ ಜನರಿಗೆ ಮಾತ್ರ ಗೊತ್ತಿರುವುದು, ಉದಹರಣೆಗೆ ಸ್ಥಪತಿ.

ಶಿಲ್ಪಿಯ ಕಲ್ಲಿನ ಮೂರ್ತಿಗೆ ಚೈತನ್ಯ ತುಂಬುವುದು ಒಂದು ವಿದ್ಯೆ. ಈಗಿನ ಆಧುನಿಕ ವಿಜ್ಞಾನದಲ್ಲೂ, ಕಲ್ಲಿನಲ್ಲಿ ಶಕ್ತಿ/ ಚೈತನ್ಯ ತುಂಬುವುದು ಸಾಧ್ಯ ಎಂದು ಹಲವಾರು ಪ್ರಯೋಗಗಳು ನಡೆದಿವೆ. ಈ ರೀತಿ ಚೈತನ್ಯವನ್ನು ಸಾಮಾನ್ಯ ಜನರಿಗೆ ತಲುಪಿಸುವುದೇ ದೇವಸ್ಥಾನಗಳನ್ನು ನಿರ್ಮಿಸಿರುವ ಮೂಲ ಉದ್ಧೇಶ. ಆಧ್ಯಾತ್ಮಿಕ ಚಟುವಟಿಕೆಗಳ ಉದ್ಧೇಶ ನಮ್ಮಲ್ಲಿರುವ ಜೀವ ಚೈತನ್ಯವನ್ನು ಊರ್ಧ್ವಮುಖಗೊಳಿಸುವುದು. ಇದು ಪೂಜೆ, ಮಂತ್ರ, ಜಪ ಮತ್ತು ದೇವಸ್ಥಾನಕ್ಕೆ ಹೋಗುವುದರಿಂದ ಸಾಧ್ಯವಾಗುವುದು.

ಆದರೆ ಮುಟ್ಟಾಗುತ್ತಿರುವಾಗ, ಮಹಿಳೆಯರಿಗೆ ಈ ಚಟುವಟಿಕೆಗಳಿಂದ ಅವರ ಅಪಾನ ವಾಯುವಿನ ಚಲನೆಯ ದಿಕ್ಕಿನಲ್ಲಿ ಗೊಂದಲ ಉಂಟಾಗಬಹುದು. ಕೆಳದಿಕ್ಕಿಗೆ ಹೋಗಬೇಕಾಗಿರುವ ಅಪಾನ ವಾಯುವನ್ನು ಮೇಲ್ದಿಕ್ಕಿಗೆ ಸೆಳೆದರೆ, ಹೊಟ್ಟೆ ನೋವು ಅನುಭವಿಸಬಹುದು. ಹೀಗೇ ಹಲವಾರು ಬಾರಿ ಮಾಡಿದ್ದರೆ  ರಕ್ತಸ್ರಾವವು ನಿಂತುಹೋಗುವುದು, ಅತಿಸ್ರಾವವಾಗುವುದು, ತೀವ್ರ ನೋವುಂಟಾಗುವ ಸಂಭವಗಳು ಸಾಧ್ಯ.

ನಾನು ಈ ವಿಷಯಗಳ ಕುರಿತು ಬರೆಯಲು ಶುರುಮಾಡಿ ಎರಡು ವರ್ಷಗಳಾಗಿವೆ. ಈ ನಡುವೆ ಮಹಿಳೆಯರು ನನಗೆ ಬರೆದಿರುವ ಪತ್ರಗಳಲ್ಲಿ, ಇಬ್ಬರು ಈ ವಿಷಯದ ಬಗ್ಗೆ ತಮ್ಮ ವೈಯುಕ್ತಿಕ ಅನುಭವಗಳನ್ನುಹಂಚಿಕೊಂಡಿದ್ದರು. ಚಿಕ್ಕವಯಸ್ಸಿನಿಂದ ತನ್ನ ಅಮ್ಮ, ನಂತರ ಅತ್ತೆ ಹೇಳಿರುವ ಮಾತನ್ನು ಎದುರಿಸಿ,ಮುಟ್ಟಿನ ಸಮಯದಲ್ಲಿ ಎಲ್ಲಾ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಪರಿಣಾಮ, ಈಗ 45 ವರ್ಷ ವಯಸ್ಸಿನ ಈ ಮಹಿಳೆ ಅತಿ ರಕ್ತಸ್ರಾವದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಎಲ್ಲಾ ಪರೀಕ್ಷೆಗಳನ್ನು ಮಾಡಿದನಂತರ ಕಾರಣ ಕಂಡುಹಿಡಿಯಲಾರದೆ, ನನಗೆ ಪತ್ರ ಬರೆದರು. ಇನ್ನೊಬ್ಬ ಮಹಿಳೆ ಬೇರೆ ದೇಶದವರು. ಮುಟ್ಟಿನ ಸಮಯದಲ್ಲಿ ಸ್ನೇಹಿತರ ಮನೆಯಲ್ಲಿ ಸತ್ಸಂಗಕ್ಕೆ ಹೋಗಿದ್ದ ಅವರು. ಅಲ್ಲಿ ದೇವರ ದರ್ಶನಕ್ಕೆ ಮುಂದೆ ಬಂದು ತಲೆಬಗ್ಗಿಸಿ ಹೋದ ತಕ್ಷಣ ಹೊಟ್ಟೆಯ ಕೆಳಭಾಗದಲ್ಲಿ ಅತೀವ ನೋವು ಶುರುವಾಯಿತು ಎಂದು ಬರೆದಿದ್ದಾರೆ.

ಈ ಮೇಲ್ಕಂಡ ವಿಷಯಗಳಲ್ಲಿ ಸತ್ಯಾಂಶ ಇದ್ದರೆ, ಇದನ್ನು ಆಳವಾಗಿ ಅಧ್ಯಯನ ಮಾಡುವುದು ಅತ್ಯಗತ್ಯ. ಯಾಕೆಂದರೆ, ಇದು ಮಹಿಳೆಯರ ಮುಟ್ಟು, ಸಂತಾನೋತ್ಪತ್ತಿ ಪ್ರಕ್ರಿಯೆ ಹಾಗೂ ಮುಂದಿನ ಪೀಳಿಗೆಯ ಆರೋಗ್ಯದ ಪ್ರಶ್ನೆ.

 1. ಗೊಲ್ಲರ ಸಮಸ್ಯೆ ನಮ್ಮೆಲ್ಲರ ಸಮಸ್ಯೆ

ಇತ್ತೀಚೆಗೆ ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಲ್ಲಿರುವ ಗೊಲ್ಲ ಸಮುದಾಯಗಳಲ್ಲಿ ಆಚರಣೆಯಲ್ಲಿರುವ ಪದ್ಧತಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಮನೆ ಆಚೆ ಬೇರೆ ಗುಡಿಸಲಿನಲ್ಲಿ ಇರುವುದು, ಬಾಣಂತಿಯರನ್ನು ಬೇರೆ ಗುಡಿಸಿಲಿನಲ್ಲಿ ಕೂರಿಸುವುದು, ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಈ ಎಲ್ಲಾ ಚರ್ಚೆಗಳಲ್ಲಿ ಬುದ್ದಿಜೀವಿಗಳಾದ ನಾವು ನೀವು ಗೊಲ್ಲ ಮಹಿಳೆಯರ ಪರವಾಗಿ ವಾದಿಸಿದ್ದೇವೆ. ಆದರೆ, ಈ ಪದ್ಧತಿಗಳನ್ನು ಆಚರಿಸುತ್ತಿರುವ ಗೊಲ್ಲ ಹೆಣ್ಣುಮಕ್ಕಳ ಅಭಿಪ್ರಾಯ / ಕಾರಣಗಳನ್ನು  ನಾವೆಷ್ಟು ಮಂದಿ ಸಂಯಮದಿಂದ ಆಲಿಸಿದೆವು?

ಗೊಲ್ಲರ ಆಚರಣೆ ಮತ್ತು ಪದ್ಧತಿಗಳನ್ನು ಅವರಿಂದಲೇ ಕೇಳಿ ತಿಳಿಯಲು ನಾನು ಮತ್ತು ನನ್ನ ತಂಡದವರು ಚಿತ್ರದುರ್ಗ ಮತ್ತು ಹಾಸನದಲ್ಲಿರುವ 7 ಗೊಲ್ಲರಹಟ್ಟಿಗಳ್ಳಲ್ಲಿ ಮಹಿಳೆಯರು, ಪುರುಷರು ಹಾಗು ತಾಂಡದ ಮುಖಂಡರನ್ನು ಭೇಟಿಮಾಡಿದೆವು. ಈ ಭೇಟಿಯಲ್ಲಿ ನಮಗೆ ತಿಳಿಸಿದ ಕೆಲವು ವಿಷಯಗಳು ಕೆಳಕಂಡಂತಿವೆ:

ತಾಂಡದಲ್ಲಿರುವ ಗೊಲ್ಲರ ಕುಟುಂಬದಲ್ಲಿ ಸುಮಾರು 7-10 ಜನ, ಹಸು ಅಥವಾ ಆಡುಗಳಿವೆ. ಬಡತನದ ಕಾರಣದಿಂದ ಒಂದೇ ಸೂರಿನ ಕೆಳಗೆ ಇವರ ವಾಸ್ಥವ್ಯ. ಈ ಪರಿಸ್ಥಿತಿಯಲ್ಲಿ ಮನೆಯಲ್ಲಿರುವ ಹೆಣ್ಣುಮಕ್ಕಳು ಮಹಿಳೆಯರು ಮುಟ್ಟಾದಾಗ ಅವರ ಗೌಪ್ಯತೆ ಹಾಗು ಸ್ವಚ್ಚತೆಯನ್ನು ಹೇಗೆ ಖಚಿತಪಡಿಸುವುದು? ಆಕಳುಗಳು ಮನೆಯಲ್ಲೇ ವಾಸಿಸುವುದರಿಂದ, ಅವುಗಳ ಕಾಯಲೆಗಳಿಂದ ಮುಟ್ಟಾಗಿರುವ ಅಥವಾ ಬಾಣಂತಿಯರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದು ಗೊಲ್ಲರ ಅಭಿಪ್ರಾಯವಾಗಿತ್ತು.

ಮಹಿಳೆಯರಿಗೆ ಮನೆಯಲ್ಲೇ ಬೇರೆ ಕೊಠಡಿಯ ವ್ಯವಸ್ಥೆ ಮಾಡುವುದಕ್ಕೂ ಆರ್ಥಿಕ ಪರಿಸ್ಥಿತಿ ಅನುಮತಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಇಡೀ ತಾಂಡದವರು ಸೇರಿ ಮಹಿಳೆಯರಿಗೆ ಅವರ ಮನೆಯಂತೆ ಬೇರೆ ಮನೆ/ಗುಡಿಸಲಿನ ವ್ಯವಸ್ಥೆ ಮಾಡುತ್ತಿದ್ದರು. ಬಾಣಂತಿಯನ್ನು ಬೇರೆ ಇಡುತ್ತಿದ್ದುದು ಅವಳು ಮತ್ತೆ ಅಲ್ಪ ಸಮಯದಲ್ಲೇ ಗರ್ಭದರಿಸುವುದನ್ನು ತಡೆಯುತ್ತಿದ್ದುದರಿಂದ, ಅದು ಅವಳ ಆರೋಗ್ಯದ ಧೃಷ್ಟಿಯಿಂದ ಉತ್ತಮ ತೀರ್ಮಾನವಾಗಿತ್ತು.  ಹಿಂದಿನ ಕಾಲದಲ್ಲಿ ಈ ಗುಡಿಸಲುಗಳನ್ನು ಕಟ್ಟಲು 10-18 ರೀತಿಯ ಔಷಧೀಯ ಸೊಪ್ಪುಗಳನ್ನು ಉಪಯೋಗಿಸುತ್ತಿದ್ದರು. ಇದರಿಂದ ವಿಷಕಾರಿ ಹಾವು, ಚೇಳು ಇತ್ಯಾದಿಗಳನ್ನು ದೂರವಿಟ್ಟು, ತಾಯಿ-ಮಗುವನ್ನು ಬೆಚ್ಚಗಿಡುವ ವಾತಾವರಣವನ್ನು ನಿರ್ಮಿಸಲಾಗುತ್ತಿತ್ತು.

ಈಗ ಈ ಮುಟ್ಟಿನ ಮನೆಗಳನ್ನು ನಿಷೇಧಿಸಿರುವುದರಿಂದ ಮಹಿಳೆಯರು ಮುಟ್ಟಿನ ಸಮಯದಲ್ಲಿ ಬೀದಿಯೆಲ್ಲೇ ತಮ್ಮ ಎಲ್ಲಾ ಕಾರ್ಯಗಳನ್ನು ಮಾಡಬೇಕಾಗಿರುವ ಪರಿಸ್ಥಿತಿ ಬಂದಿದೆ.

ಇಲ್ಲಿ ನಾವು ಗೊಲ್ಲರ ಹಳೆಯ ಪದ್ಧತಿಯಾದ ಮುಟ್ಟಿನ ಗುಡಿಸಲನ್ನು ನಿಷೇಧಿಸಿ, ಗೊಲ್ಲರನ್ನು ಪ್ರಗತಿಯ ದಾರಿಗೆ ತರಲು ಹೊರಟಿರುವಾಗ, ನ್ಯೂಯಾರ್ಕ್, ಇಂಗ್ಲೆಡ್, ಇಟಲಿ, ಫ್ರಾನ್ಸ್, ಜುರ್ಮನಿ, ಇತ್ಯಾದಿ ಅಭಿವೃಧಿ ಹೊಂದಿದ ದೇಶಗಳಲ್ಲಿ “ರೆಡ್ ಟೆಂಟ್ ಟೆಂಪಲ್”(red tent temple) ಎನ್ನುವ ಆಂದೋಲನ ಶುರುವಾಗಿದೆ. ರೆಡ್ ಟೆಂಟಿನ ಉದ್ದೇಶವೇನೆಂದರೆ – ಮಹಿಳೆಯರಿಗೆ, ಮುಖ್ಯವಾಗಿ ಮುಟ್ಟಿನ ಸಮಯದಲ್ಲಿ, ವಿಶ್ರಾಂತಿ ಸಿಗಲು ಹಾಗೂ ತಮ್ಮ ಭಾವನೆಗಳನ್ನು ಪ್ರಕಟಿಸಲು ಅವಕಾಶ ಮಾಡಿಕೊಡುವುದು. ಈ ಕೆಂಪು ಟೆಂಟ್ಗಳು ಎಲ್ಲಾ ನೆರೆಹೊರೆಯದಲ್ಲಿ ಇರಬೇಕು ಹಾಗೂ “ಮೆನ್ಸುಟ್ರುವಲ್ ಲೀವ್” ಎಂದರೆ ಮುಟ್ಟಿನ ಸಮಯದಲ್ಲಿ ರಜೆ ಹಾಕುವ ಅವಕಾಶ ಬೇಕೆಂದು – ಯುರೋಪ್ ಹಾಗು ಅಮೇರಿಕದಲ್ಲಿರುವ ಮಹಿಳೆಯರ ಹೋರಾಟ!

Source: Red Tent Temple Movement
ದೇವಯ ಚಿತ್ರದೊಂದಿಗೆ ರೆಡ್ ಟೆನ್ಟ್ ನಲ್ಲಿ ವಿದೇಶಿ ಮಹಿಳೆಯರು Source: Red Tent Temple Movement  

ಗೊಲ್ಲರ ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ತರದೆ, ಕೇವಲ ಅವರ ಸಾಂಸ್ಕೃತಿಕ ಪದ್ಧತಿಗಳನ್ನು ವಿರೋಧಿಸುವುದರಲ್ಲಿ ಅರ್ಥವಿದೆಯೇ? ಗೊಲ್ಲರಿಗೆ ಅವರ ಹಕ್ಕುಗಳನ್ನು ಕೊಡುವುದಕ್ಕೆ ಹೊರಟಿರುವ ನಾವು, ಅವರಿಗೆ ಹೊಸ ಸಮಸ್ಯೆಗಳನ್ನು ಕೊಟ್ಟಿರುವುದು, ಯೋಚನೆ ಮಾಡಬೇಕಿರುವ ವಿಷಯ.

 1. ಬೇರೆ ದೇಗಳಲ್ಲಿ ಭಾರತದ ಮಹಿಳೆಯರ ಬಗ್ಗೆ ಇರುವ ಅಭಿಪ್ರಾಯ

ಗೊಲ್ಲರ ಪರವಾಗಿ ನಾವು ತೀರ್ಮಾನಿಸಿದ ಹಾಗೇ,  ನಮ್ಮ  ದೇಶದ ಮಹಿಳೆಯರ ಪರವಾಗಿ ಅಭಿವೃದ್ಧಿಹೊಂದಿದ ರಾಷ್ಟ್ರದವರು ತೀರ್ಮಾನ ಮಾಡುತ್ತಿದ್ದಾರೆ.

ಭಾರತದಲ್ಲಿನ ಮುಟ್ಟಿನ ಸಮಸ್ಯೆಯ ಬಗ್ಗೆ ಬರೆಯುವ ಬಿ.ಬಿ.ಸಿ, ನ್ಯೂಸ್ ವೀಕ್ ಇತ್ಯಾದಿ ಅಂತರಾಷ್ಟ್ರೀಯ ಮಾಧ್ಯಮಗಳ ಲೇಖನಗಳನ್ನು ಓದಿದ್ದರೆ, ನಮ್ಮ ದೇಶದ ಮಹಿಳೆಯರು ಪ್ಯಾಡ್ ಸಿಗದೇ ಪುನರುತ್ಪಾದಕ ನಾಳಗಳ ಸೋಂಕು (Reproductive Tract Infection) ರೋಗಗಳಿಂದ ನರಳುತಿದ್ದಾರೆ ಎನ್ನೋ ಅಭಿಪ್ರಾಯ ಉಂಟಾಗುತ್ತದೆ; ಶೌಚಾಲಯ, ನೀರು ಹಾಗು ಪ್ಯಾಡಿನ ಕೊರತೆಯಿಂದ ಭಾರತದ ಹೆಣ್ಣುಮಕ್ಕಳು ಶಾಲೆ ತಪ್ಪಿಸುತ್ತಿದ್ದಾರೇ ಎಂದೂ; ನಮ್ಮಲ್ಲಿರುವ ಮುಟ್ಟಿಗೆ ಸಂಬಧಪಟ್ಟ ಪದ್ದತಿಗಳೆಲ್ಲಾ ಮೂಧನಂಬಿಕೆ ಎಂದೂ ಬರೆದಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಭಾರತದ ಹುಡುಗಿಯರಿಗೆ, ಮಹಿಳೆಯರಿಗೆ ಕೂಡಲೇ ಸ್ಯಾನಿಟರಿ ಪ್ಯಾಡುಗಳ ಕೊಡುಗೆ ನೀಡಲಾಗುತ್ತದೆ. ಇದಕ್ಕೆ ಬೇಕಿರುವ “ಮೆನ್ಸುಟ್ರುವಲ್ ಹೈಜೀನ್ ಗೈಡ್ ಲೈನ್ಸ್” (ಮುಟ್ಟಿನ ನೈರ್ಮಲ್ಯ ಮಾರ್ಗದರ್ಶನ ಸೂತ್ರ) ಕೂಡ ಸರ್ಕಾರ ಇತ್ತೀಚೆಗೆ ತಯಾರುಮಾಡಿದೆ.

ಅಂತರಾಷ್ಟ್ರೀಯ ಮಾಧ್ಯಮಗಳ ಲೇಖನಗಳಲ್ಲಿರುವ ವಸ್ತು ಸ್ಥಿತಿಯನ್ನು ಪರಿಶೀಲಿಸಲು, ನಮ್ಮ ತಂಡ ಸುಮಾರು 100 ಸಂಶೋಧನ ಲೇಖನಗಳನ್ನು ಅಧ್ಯಯನ ಮಾಡಿದೆವು. ಈ ಮೂಲಕ ಅರಿತ ವಿಷಯಗಳ ಸಾರಂಶ ಕೆಳಕಂಡಂತಿದೆ:

 • ಪ್ರತ್ಯೇಕ ವಸ್ತುವಿನ (ಉ: ಮುಟ್ಟಿನ ಬಟ್ಟೆ) ಉಪಯೋಗದಿಂದ ಸೋಂಕುರೋಗಗಳು ಉಂಟಾಗುವುದು ಎಲ್ಲೂ ಸಾಬಿತುಪಡಿಸಿಲ್ಲ. ಮುಟ್ಟಿನ ಬಟ್ಟೆ ಉಪಯೋಗಿಸುವುದರಿಂದ ಬ್ಯಾಕ್ಟಿರಿಯಲ್ ವಜಯ್ನೋಸಿಸ್ (ಬಿ.ವಿ), ಯೂರಿನರಿ ಟ್ರಾಕ್ಟ್ ಇನ್ೞೆಕ್ಶನಂತ (ಯು.ಟಿ.ಐ) ರೋಗಗಳು ಉಂಟುಮಾಡುವ ರೋಗಾಣು (ವೈಯರಸ್) ಯಾವ ರೀತಿ ಸ್ತ್ರೀಯ ಜನನಾಂಗದಲ್ಲಿ ಪ್ರವೇಶ ಮಾಡುವುದು ಎಂದು ಇನ್ನೂ ಪತ್ತೆಯಾಗಿಲ್ಲ – ಇದು ಲಂಡನ್ ಸ್ಕೂಲ್ ಆಫ್ ಹಯ್ಜೀನ್ ಅನ್ಡ್ ಟ್ರಾಪಿಕಲ್ ಮೆಡಿಸೆನ್ ಸಂಸ್ಥೆಯಲ್ಲಿರುವರು ಅಧ್ಯಯನ ಮಾಡಿರುವ 14 ಸಂಶೊಧನ ಪತ್ರಗಳ ಪರಿಣಾಮವಾಗಿ ಹೇಳಿರುವ ವಿಶಯ.
 • ಸ್ಯಾನಿಟರಿ ಟೆಕ್ನಾಲಜಿ, ಅಂದರೇ ಪ್ಯಾಡುಗಳು, ಶೌಚಾಲಯ, ಇತ್ಯಾದಿ, ಇಲ್ಲದಿರುವುದರಿಂದ ಹೆಣ್ಣು ಮಕ್ಕಳ ಶಾಲಾ ಹಾಜಿರಾತಿ ಕಡಿಮೆಯಾಗುವುದು ತುಂಬಾ ಕಡಿಮೆ (1%) – ಇದು ಅಮೇರಿಕನ್ ಎಕೊನಾಮಿಕ್ ಅಸೊಸಿಯೇಶನ್, ಒಂದು ವರ್ಷ ನೇಪಾಳಿನಲ್ಲಿ ಶಾಲಾ ಮಕ್ಕಳಿಗೆ ಸ್ಯಾನಿಟರಿ ಪ್ಯಾಡುಗಳನ್ನು ಕೊಟ್ಟು ಮಾಡಿರುವ ಪ್ರಯೋಗದ ಫಲಿತಾಂಶ.
 • ಪ್ರಸ್ತುತ ಚರ್ಚೆಗಳ ಪ್ರಕಾರ, ಸ್ಯಾನಿಟರಿ ಪ್ಯಾಡುಗಳು, ಶೌಚಾಲಯಗಳು ಇತ್ಯಾದಿ ಇದ್ದರೆ, ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕುಳು ರಜೆ ಹಾಕುವುದಿಲ್ಲ. ಹಾಗಿದ್ದರೆ, ಇವೆಲ್ಲಾ ಇರುವ ಅಭಿವೃದ್ಧಿಹೊಂದಿದ ರಾಷ್ಟ್ರಗಳಲ್ಲಿ ಮುಟ್ಟಿನ ಸಮಯದಲ್ಲಿ ಶಾಲಾ ಗೈರಿನ ಸಮಸ್ಯೆಯೇ ಇರಬಾರದು. ಆದರೆ, ಕೆನಡಾದಲ್ಲಿ 17%, ವಾಶಿಂಗ್ಟನ್ ಡಿ.ಸಿ ಯಲ್ಲಿ 21%, ಸಿಂಗಪೂರಿನಲ್ಲಿ 24%, ಆಸ್ಟ್ರೇಲಿಯಾದಲ್ಲಿ 26% ಹಾಗೂ ಟೆಕ್ಸಸ್ ನಲ್ಲಿ 38% ಹೆಣ್ಣುಮಕ್ಕಳು ಮುಟ್ಟಿನ ಸಮಯದಲ್ಲಿ ಶಾಲೆಗೆ ಹೋಗುವುದಿಲ್ಲ. ಭಾರತದಲ್ಲಿ ಈ ಸಂಖ್ಯೆ 24% ಎಂದು ಹೇಳಲಾಗಿದೆ. ನಾವು ಅಧ್ಯಯನ ಮಾಡಿದ ಎಲ್ಲಾ ಲೇಖನಗಳಲ್ಲೂ ಶಾಲಾ ಹಾಜರಾತಿ ಕಡಿಮೆಯಾಗುವುದರ ಕಾರಣ ಡಿಸ್ಮೇನೋರಿಯ, ಅಂದರೇ ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೇ ನೋವು, ಬೆನ್ನು ನೋವು, ಇತ್ಯಾದಿ ಸಮಸ್ಯೆಗಳು. ನ್ಯೂಯಾರ್ಕಿನಲ್ಲಿ ಡಿಸ್ಮೇನೊರಿಯ ಇರುವ ಮಕ್ಕಳಿನಲ್ಲಿ 42% ಈ ಕಾರಣದಿಂದ ಶಾಲೆ ತಪ್ಪಿಸುತ್ತಿದ್ದಾರೆ.

ಇನ್ನೂ ಕಣ್ಣು ತೆರೆಸುವ ವಿಷಯವೆಂದರೆ ಅಭಿವೃದ್ಧಿ ಹೊಂದಿದ  ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮುಟ್ಟಿಗೆ  ಸಂಬಂಧಿಸಿದ ಅಸ್ವಸ್ಥತೆಗಳ ಹೋಲಿಕೆ, ಮತ್ತು ಇದರಲ್ಲಿ ಭಾರತದ ಮಹಿಳೆ ಹಾಗು ಹದಿಹರೆಯದ ಹೆಣ್ಣುಮಕ್ಕಳ ಪರಿಸ್ಥಿತಿ. ಹಲವಾರು ಸಂಶೊಧನಾ ಲೇಖನಗಳನ್ನು ಅಧ್ಯಯನ ಮಾಡಿ, ಅಂಖ್ಯೆ-ಸಂಖ್ಯೆಗಳನ್ನು ತುಲನೆ ಮಾಡಿದುದರ ಫಲಿತಾಂಶ ಇಲ್ಲಿದೆ

Adult women

ವಯಸ್ಕ ಸ್ತ್ರೀಯರು

Mennorhagia (ಅತೀ ರಕ್ತ ಸ್ರಾವ) Dysmenorrhoea (ಮುಟ್ಟಿನ ಸಮಯದ  ನೋವುಗಳು) Oligomennorhea & Irregular periods

(ಅನಿಯತ ಮುಟ್ಟು)

Excessive White discharge

(ಅತಿಯಾದ ಬಿಳಿ ಮುಟ್ಟು ವಿಸರ್ಜನೆ)

ಭಾರತ

(8 ಲೇಖನಗಳು)

1.6% to 18.7% 11% to 68.6% 7.4% to 12% 4% to 28%
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು

(7 ಲೇಖನಗಳು)

1% to 35% 14% to 89.1% 16% to 19.4% 9% to 46%
ಅಭಿವೃದ್ಧಿಹೊಂದಿದ ರಾಷ್ಟ್ರಗಳು

(13 ಲೇಖನಗಳು)

22% to 54% 16% to 77.6% 15% to 17% ಅಂಕಿ ಅಂಶಗಳು ಲಭ್ಯವಿಲ್ಲ

 

Adolescent Girls

ಹದಿಹರೆಯದ ಹೆಣ್ಣುಮಕ್ಕಳು

Mennorhagia (ಅತೀ ರಕ್ತ ಸ್ರಾವ) Dysmenorrhoea (ಮುಟ್ಟಿನ ಸಮಯದ  ನೋವುಗಳು) Oligomennorhea & Irregular periods

(ಅನಿಯತ ಮುಟ್ಟು)

Excessive White discharge

(ಅತಿಯಾದ ಬಿಳಿ ಮುಟ್ಟು ವಿಸರ್ಜನೆ)

ಭಾರತ

(13 ಲೇಖನಗಳು)

0.8% to 23% 11.3% to 72.6% 2.3% to 44.6% 3.6% to 60.6%
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು

(8 ಲೇಖನಗಳು)

3.6% to 38% 25% to 84.9% 3.6% to 37.2% 2.3%
ಅಭಿವೃದ್ಧಿಹೊಂದಿದ ರಾಷ್ಟ್ರಗಳು

(10 ಲೇಖನಗಳು)

8.6% to 63.6% 38.6% to 94% 9% to 80% ಅಂಕಿ ಅಂಶಗಳು ಲಭ್ಯವಿಲ್ಲ

ಭಾರತದ ಮಹಿಳೆಯರಲ್ಲಿನ ಮುಟ್ಟಿನ ಸಮಸ್ಯೆಗಳು ಬೇರೆ ದೇಶದ ಮಹಿಳೆಯರಕ್ಕಿಂತ ಕಡಿಮೆ ಇರುವುದು ಬಹಳಷ್ಟು ಜನರಿಗೆ ಆಶ್ಚರ್ಯಕರವಾಗಿರಬಹುದು. ನಮ್ಮ ಆಹಾರ ಪದ್ಧತಿಗಳು ಹಾಗೂ ಮುಟ್ಟಿನ ಸಮಯದಲ್ಲಿನ ವಿಶ್ರಾಂತಿ ಪದ್ಧತಿಗಳು ಇದಕ್ಕೆ ಕಾರಣವಿರಬಹುದಾ?

ಅಮೇರಿಕನ್ ಎಕೊನೋಮಿಕ್ ಅಸೊಸಿಯೇಶನ್ ಅವರು ತಮ್ಮ ರಿಪೋರ್ಟಿನಲ್ಲಿ ಬರೆದಿರುವ ಇನ್ನೊಂದು  ವಿಷಯವೇನೆಂದರೆ –  ಅಂತರಾಷ್ಟ್ರೀಯ ಸಂಸ್ಥೆಗಳು ಪ್ಯಾಡುಗಳನ್ನು ಭಾರತ, ಆಫ್ರಿಕಾ ಇತ್ಯಾದಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ತಲುಪಿಸಲು ಅತಿದೊಡ್ಡ ಸಂಖ್ಯೆಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಉದಾಹರಣೆಗೆ, ವಿಸ್ಪರ್ ಸ್ಯಾನಿಟರಿ ಪ್ಯಾಡನ್ನು ಮಾಡುವ ಪ್ರಾಕ್ಟರ್ & ಗ್ಯಾಮ್ಬಲ್ ಕಂಪನಿಯವರು 5 ಮಿಲಿಯನ್ ಅಮೆರಿಕನ್ ಡಾಲರ್, ಹಾಗೂ ಕ್ಲಿಂಟನ್ ಗ್ಲೋಬಲ್ ಇನಿಷಿಯೇಟಿವ್ ರವರು 2.8 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಬಂಡವಾಳ ಹೂಡಿದ್ದಾರೆ. ಅಂದರೆ, ಮುಂದಿನ ದಿವಸಗಳಲ್ಲಿ ನಮ್ಮ ಗ್ರಾಮೀಣ ಮಹಿಳೆಯರು ಪ್ಯಾಡುಗಳ ಸುರಿ ಮಳೆಯನ್ನೇ ನೋಡಲಿದ್ದಾರೆ.

ನಮ್ಮ ದೇಶದಲ್ಲಿ ಸ್ಯಾನಿಟರಿ ಪ್ಯಾಡುಗಳನ್ನು ವಿತರಣೆ ಮಾಡುವಾಗ, ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾದ ದೇಶಗಳಲ್ಲಿ ಪರಿಸರ ಕಾಳಜಿಯಿಂದ ಪುನರ್ಬಳಕೆ ಮಾಡಬಹುದಾದಂತಹ “ಕ್ಲಾತ್ ಪ್ಯಾಡ್”  ಹಾಗೂ “ಮೆನ್ಸುಟ್ರುವಲ್ ಕಪ್” ಗಳನ್ನು  ಪ್ರೋತ್ಸಾಹಿಸುತ್ತಿದ್ದಾರೆ. ಕುತೂಹಲದ ವಿಷಯವೆಂದರೆ ನಮ್ಮ ಗ್ರಾಮೀಣ ಮಹಿಳೆಯರು ಹಲವಾರು ತಲೆಮಾರುಗಳಿಂದ ಉಪಯೋಗಿಸುತ್ತಿರುವ ಬಟ್ಟೆಯನ್ನೇ ಪದರವಾಗಿ ಹೊಲಿದು ಈಗ “ಕ್ಲಾತ್ ಪ್ಯಾಡ್” ಎನ್ನೋ ಹೆಸರಿನಲ್ಲಿ 500 – 600 ರೂಪಾಯಿಗಳಿಗೆ ಪರಿಸರಪ್ರೇಮಿಗಳು ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷ ಬಾಸ್ಟೆನ್ ನಲ್ಲಿ ನಡೆದ “ಮೆನುಸ್ಟ್ರುವಲ್ ಹೆಲ್ತ್ ಅಂಡ್ ರಿಪ್ರೊಡಕ್ಟಿವ್ ಜಸ್ಟಿಸ್” ಅಂತರಾಷ್ಟ್ರೀಯ ಸಮ್ಮೇಳನಕ್ಕೆ  ನನ್ನನ್ನು ಆಮಂತ್ರಿಸಿದ್ದಾಗ, ನನಗೆ ಈ ವಿಷಯಗಳು ಸ್ಪಷ್ಠವಾಗಿ ತಿಳಿಯಲು ಅವಕಾಶವಾಯಿತು. ಆಸ್ಟ್ರೇಲಿಯಾದ ಮಹಿಳೆಯೊಬ್ಬರು ನನ್ನ ಬಳಿ ಬಂದು ಭಾರತದ ಗ್ರಾಮೀಣ ಮಹಿಳೆಯರಿಗೆ ಕ್ಲಾತ್ ಪ್ಯಾಡ್ ಗಳನ್ನು ಹಂಚುವ ಯೋಜನೆ ಮಾಡೋಣ ಎಂದು ನನ್ನನ್ನು ಕೇಳಿದರು. ಹೇಗೆ ಉತ್ತರ ಕೊಡಲಿ ಎಂದು ಯೋಚನೆಯಲ್ಲಿ ಮುಳುಗಿದ್ದಾಗ, ಇನ್ನೊಬ್ಬ ಮಹಿಳೆ ಬಂದು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ “ರೆಡ್ ಟೆಂಟ್” ಶುರುಮಾಡೋಣ ಎಂದು ಉತ್ಸಾಹದಿಂದ ಕೇಳಿದ್ದರು!

ಹೀಗೆ, ಕಾಮನ್ ಸೇನ್ಸ್ ಕಳೆದು ಕೊಂಡು ಬೇರೆ ದೇಶವನ್ನು ನಕಲು ಮಾಡಲು ಹೊರಟ ಬುದ್ಧಿಜೀವಿಗಳಾದ ನಮಗೆ,s ನಮ್ಮದೇಯಾದ ಮುಟ್ಟಿನ ಬಟ್ಟೆ ಕ್ಲಾತ್ ಪ್ಯಾಡಿನ ರೂಪದಲ್ಲಿ ಹಾಗೂ ಮುಟ್ಟಿನ ಗುಡಿಸಲುಗಳು ರೆಡ್ ಟೆಂಟ್ ರೂಪದಲ್ಲಿ ಈಗ ಹಣಕೊಟ್ಟು ಖರೀದಿಸುವ ಪರಿಸ್ಥಿತಿ ಬೇಕಿತ್ತಾ?

References:

 1. Charaka Samhita Volume I & II
 2. Astanga Hridaya Sutrasthan
 3. Maya Tiwari: Women’s Power to Heal: Through Inner Medicine
 4. Maharishi Ayurveda : Cure PMS with Ayurveda
 5. Endometriosis: A comparison of the Allopathic and Ayurvedic models of the disease and its treatment (by Daya Deyhim C.A.S)
 6. Frawley, David. 1989. Ayurvedic Healing. Passage Press.
 7. Lad, Vasant. 2000. Textbook of Ayurveda. The Ayurvedic Press.
 8. Agama Academy. http://www.agamaacademy.org/index-en.php
 9. Lyn Freeman. Chapter 20 of “Energetics and Spirituality”. Measurement of the Human Biofield and Other Energetic Instruments.
 10. Vastu Shastra and Sacred Architecture. The Clarion Call Magazine
 11. David Osborn. Science of the Sacred
 12. Keith Critchlow, Order in Space, Thimes and Hudson (1969).
 13. Kramrisch, Stella, The Hindu Temple, Motilas Banarsidas, N. Delhi (1976)
 14. Mythri Speaks Trust. Voice of the Gollas
 15. Red Tent Temple Movement – http://redtenttemplemovement.com/
 16. Red Tent Directory. A listing site for red tents in Europe. http://redtentdirectory.com/
 17. New York Times: Paid Menstrual Leave is now a Thing
 18. Mythri Speaks Trust. Menstruation – Rhetoric, Research, Reality
 19. BBC News. 100 Women 2014: The Taboo of Menstruating in India (2014)
 20. Huffington Post: Menstrual Cycle Still a Barrier to Achieve Gender Equality (2016)
 21. Newsweek: The Fight to End Period Shaming is going Mainstream (2016)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s